ಅಖಿಲ ಭಾರತ ವೀರಶೈವ ಮಹಾಸಭೆಯ ಸಂಸ್ಥಾಪಕರು : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು

MahasabhaFounderಪೂಜ್ಯ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು

ಜನನ :

ವೀರಶೈವ ಧರ್ಮ ಹಾಗೂ ಸಮಾಜದ ಉದ್ದಾರಕರಾದ ಹಾನಗಲ್ಲ ಕುಮಾರ ಶಿವಯೋಗಿಗಳ ಹುಟ್ಟು ಹೆಸರು 'ಹಾಲಯ್ಯ' ಧಾರವಾಡ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಜೋಯಿಸರ ಹರಳಳ್ಳಿಯಲ್ಲಿ ಇವರು ಕ್ರಿ.ಶ. 1867ನೇ ಶಾಲಿವಾಹನ ಶಕೆ 1789ನೇ ಪ್ರಭವ ನಾಮ ಸಂವತ್ಸರ ಭಾದ್ರಪದ ಶುದ್ಧ ತ್ರಯೋದಶಿ ಬುಧವಾರ ಬ್ರಾಹ್ಮೀ ಮುಹೂರ್ತದಲ್ಲಿ ಜನಿಸಿದರು.

ಬಾಲ್ಯ - ಶಿಕ್ಷಣ :

ಜೋಯಿಸರ ಹರಳಳ್ಳಿಯಲ್ಲಿ 'ಸಾಲಿಮಠ' ಎಂಬ ಹೆಸರಿನ ಗುರುಸ್ಥಾನ ಪಡೆದ ಗಣಂಗಳಾದ ಕೊಟ್ಟೂರಪ್ಪಯ್ಯನವರ ಪುತ್ರರೇ ಬಸವಪ್ಪಯ್ಯ. ಅವರ ಸತಿ ಶಿರೋಮಣಿ ನೀಲಮ್ಮ. ಇವರೀರ್ವರ ಪುತ್ನರತ್ನರೇ 'ಹಾಲಯ್ಯ'. ಶಿವಾಚಾರ ಸಂಪನ್ನರೂ ಲಿಂಗ ಪೂಜಾ ನಿರತರೂ ಸಾತ್ವಿಕರೂ ಆದ ತಂದೆ-ತಾಯಿ, ಬಂಧು-ಬಳಗ ಕೂಡಿ, ಒಂದು ದೊಡ್ಡ ಕುಟುಂಬವೇ ಆಗಿ ಕಡುಬಡತನದಲ್ಲಿ ಜೀವಿಸುತ್ತಿದ್ದರು. ಪ್ರತಿನಿತ್ಯ ಇಬ್ಬರು ಇಲ್ಲವೆ ಮೂವರು ನೆರೆಯ ಹಳ್ಳಿಗಳಿಗೆ ಹೋಗಿ 'ಕಂತಿಭಿಕ್ಷೆ' ಮಾಡದ ವಿನಃ ಕುಟುಂಬದ ಚರಿತಾರ್ಥವೇ ದೈನಂದಿನ ನಿರ್ವಹಣೆ ಕಷ್ಠವಾಗಿತ್ತು. ಆರು ವರುಷದ ಬಾಲಕ ಹಾಲಯ್ಯ, ಊರಲ್ಲಿಯ ಅಜ್ಜನ ಗಾವಠೀ ಶಾಲೆಯಲ್ಲಿ ಅಕ್ಷರಾಭ್ಯಾಸವನ್ನು ಮಾಡುತ್ತ, ಕಂತೀಭಿಕ್ಷೆಯ ಕಾಯಕವನ್ನು ನಡೆಸುತ್ತಿದ್ದ. ಒಂದು ದಿನ ಹಳ್ಳಿಗೆ ಹೋಗಿ 'ಭಿಕ್ಷೆಯನ್ನು ಮಾಡುತ್ತಿದ್ದಾಗ ಓರ್ವ ವಯೋವೃದ್ಧನಾದ ಮನುಷ್ಯನು ಹಾಲಯ್ಯನಿಗೆ, "ಏ, ಅಯ್ಯಪ್ಪ ನೀ ಹೀಂಗ ಎಷ್ಟು ದಿವಸಾಂತ ಭಿಕ್ಷೆ ಬೇಡಾಂವಾಯೋ ಇನ್ನೂ ವಯಸ್ಸು ಸಾಣದ ಕಾಣತೈತಿ, ಓದೀ, ಬರೆದು ಮಾಡಿ ಬುದ್ದಿವಂತನಾಗೋದನ್ನ ಬಿಟ್ಟು, ದಿನಾ ಭಿಕ್ಷೆ ಬೇಡಿದರ ಆಗೋದೇನು? ನೀ ಹುಟ್ಟದಿದ್ರ ಜಗತ್ತೇನೂ ಹಾಳಾಗಿ ಹೋಗುತಿತ್ತಾ?" ಎಂದು ಕಳಕಳಿಯಿಂದ ಬೈದನು. ಆಗ ಆ ಯಜಮಾನನ ಮಾತು ಹಾಲಯ್ಯನ ಮನದಲ್ಲಿ ನಾಟಿ, ತನ್ನ ಕಂತೀ ಭಿಕ್ಷೆಯನ್ನು ಅರ್ಧಕ್ಕೆ ಮುಗಿಸಿ, ದುಃಖಿತನಾಗಿ, ಮುದುಕನ ಕಳಕಳಿ ಮಾತು ಮನದೊಳಗೆ ಮರುಕಳಿಸಿ, ತನ್ನ ಪರಿಸ್ಥಿತಿಗಾಗಿ ಕಣ್ಣೀರು ಕರೆಯುತ್ತ ಮನೆಯ ದಾರಿ ಹಿಡಿದನು. ಭಿಕ್ಷೆ ಬೇಡುವುದನ್ನು ನಿಲ್ಲಿಸಿ. ಮುಂದಿನ ವಿದ್ಯಾಭ್ಯಾಸಕ್ಕಾಗಿ ಯೋಚನಾಮಗ್ನನಾದನು.

ಅಜ್ಜನ ಗಾವಠೀ ಶಾಲೆಯಲ್ಲಿ ಮೂರನೇ ತರಗತಿಯವರೆಗೆ ಓದಿದ ಹಾಲಯ್ಯ ದೇವರಗುಡ್ಡ ರೈಲು ನಿಲ್ದಾಣದ ಪಕ್ಕದಲ್ಲಿ ಪವಡಿಸಿರುವ 'ಕಜ್ಜರಿ' ಗ್ರಾಮಕ್ಕೆ ಮುಂದಿನ ಓದಿಗಾಗಿ ಹೋದನು. ಅಲ್ಲಿ ಮಹಾದೇವ ಪಂಥ ಜೋಗಳೇಕರ ಎಂಬುವರು ನುರಿತ ಶಿಕ್ಷಕರಿದ್ದು, ಅವರ ಶಾಲೆಯ ಕೀರ್ತಿ ಸುತ್ತೆಲ್ಲ ಪ್ರಸಿದ್ದಿಯನ್ನು ಪಡೆದಿತ್ತು. ಕಜ್ಜರಿಗ್ರಾಮದಲ್ಲಿ ಹಿರೇಮಠ ರಾಚಯ್ಯನೆಂಬ ಯಜಮಾನರ ಹಾಗೂ ಇನ್ನುಳಿದವರ ಉದಾರಾಶ್ರಯವನ್ನು ಪಡೆದು ಮುಲ್ಕೀ ಪರೀಕ್ಷೆಯವರೆಗೆ ಅಲ್ಲಿಯೇ ಓದಿದನು. ಆ ಶಾಲೆಯಲ್ಲಿ ಒಳ್ಳೇ ಪ್ರತಿಭಾವಂತ ವಿದ್ಯಾರ್ಥಿಯೆಂದು ಹೆಸರನ್ನೂ ಗಳಿಸಿದನು. ಅಸುಂಡಿ ಶಿವನ ಗೌಡ ಎಂಬ ಸಹ ಪಾಠಿಯೊಂದಿಗೆ ಧಾರವಾಡಕ್ಕೆ ನಡೆದುಕೊಂಡೇ ಹೋಗಿ, ಅಲ್ಲಿ ಮುಲ್ಕೀ ಪರೀಕ್ಷೆಯನ್ನು ಮುಗಿಸಿಕೊಂಡು ಮರಳಿ ಊರಿಗೆ ಬಂದನು. ಆದರೆ ಆ ಪರೀಕ್ಷೆಯಲ್ಲಿ ಹಾಲಯ್ಯ ಪ್ರತಿಭಾವಂತ ವಿದ್ಯಾರ್ಥಿಯೆನಿಸಿದ್ದರೂ ಉತ್ತೀರ್ಣನಾಗಿರಲಿಲ್ಲ! ಪುರುಷನ ಭಾಗ್ಯವನ್ನು ಅರಿಯುವುದು ಸುಲಭವಲ್ಲ. ಏಕೆಂದರೆ ಮುಲ್ಕೀ ಪರೀಕ್ಷೆ ಪಾಸಾಗಿದ್ದರೆ ಹಾಲಯ್ಯ ಟ್ರೇನಿಂಗ್ ಕಾಲೇಜನ್ನು ಮುಗಿಸಿ ಹಳ್ಳಿಯ ಶಾಲೆಯ ಮಾಸ್ತರನಾಗಿ ಬದುಕನ್ನು ಮಾಡುತ್ತಿದ್ದನೋ; ಏನೋ?! ಮನುಷ್ಯ ತಾನೊಂದು ಬಗೆದರೆ, ದೈವ ಮತ್ತೊಂದನ್ನು ಬಗೆದಿರುತ್ತದೆ! ಇಡೀ ಸಮಾಜದ ಉದ್ಧಾರ ಕಾರ್ಯವನ್ನೇ ಕೈಕೊಳ್ಳಲಿರುವ ಹಾಲಯ್ಯನ ಬದುಕಿನ ವಸ್ತು ಸ್ಥಿತಿ ಅವನಿಗೆ ಅಷ್ಟೇ ಏಕೆ; ಯಾರಿಗೂ ತಿಳಿದಿರಲಿಲ್ಲ.

ಮುಲ್ಕೀ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಹಾಲಯ್ಯನು ಜೋಯಿಸರ ಹರಳಳ್ಳಿಯಿಂದ ಅಜ್ಜನ ಊರಾದ ಲಿಂಗದಳ್ಳಿಗೆ ಹೋದನು. ಅಲ್ಲಿ ಸಮಾಳದ ಬಸವಪ್ಪಯ್ಯ ಎಂಬುವರಲ್ಲಿ ಕನ್ನಡ ಗ್ರಂಥಗಳನ್ನೂ ಮತ್ತು ನಿಜಗುಣರ ಷಟ್ ಶಾಸ್ತ್ರಗಳನ್ನೂ ಓದಲು ಆರಂಭಿಸಿದನು. ಹಾಗೆಯೇ ಒಂದು ಹಳ್ಳಿಯಲ್ಲಿ ಗಾವಠೀ ಶಾಲೆಯನ್ನು ಪ್ರಾರಂಭಿಸಿ, ಪಾಠ ಹೇಳಲಾರಂಭಿಸಿದನು. ಆಗ ಮಮತೆಯ ಮಾತೆಯಾದ ನೀಲಮ್ಮ ತನ್ನ ಮಗನಾದ ಹಾಲಯ್ಯನ ಮದುವೆಯನ್ನು ಮಾಡಬೇಕೆಂದು ಬಗೆದು ಅವನನ್ನು ವಿಚಾರಿಸಲು ಅಲ್ಲಿಗೆ ಬಂದಳು. ಇದನ್ನರಿತ ಹಾಲಯ್ಯ ತಾಯಿಗೆ ನಮಸ್ಕರಿಸಿ, ತಾನು ಶಾಲೆ ನಡೆಸಿ, ಗಳಿಸಿದ ಮೂರು ನೂರು ರೂಪಾಯಿಗಳನ್ನು ತಾಯಿಯ ಮಡಿಲಿಗೆ ಹಾಕಿ, ಮದುವೆಯಾಗಲು ಒಪ್ಪದೆ, ತನ್ನ ಮತ್ತು ತಾಯಿಯ ಋಣ ಸಂಬಂಧ ತೀರಿತೆಂದು ಹೇಳಿ ಆ ಊರೂ ಬಿಟ್ಟು ಹೊರಟು ಹೋದನು.

ನಿಜಗುಣರ ಸರ್ವಕೃತಿಗಳನ್ನು ಆಳವಾಗಿ ಅಧ್ಯಯನ ಮಾಡುವ ತೀವ್ರ ಅಪೇಕ್ಷೆಯನ್ನು ಹೊತ್ತು, ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಹೋದನು. ಹುಬ್ಬಳ್ಳಿಯಲ್ಲಿರುವಷ್ಟು ದಿನಗಳು ನಿತ್ಯ ರುದ್ರಾಕ್ಷಿ ಮಠದಲ್ಲಿ ಸ್ನಾನ ಪೂಜಾದಿಗಳನ್ನು ತೀರಿಸಿಕೊಂಡು. ಭವತಿ ಭಿಕ್ಷೆಯಿಂದ ಬಂದ ಪ್ರಸಾದವನ್ನೇ ಸೇವಿಸಿ, ನಿಜಗುಣರ ಪಾಠ ಪ್ರವಚನಕ್ಕಾಗಿ ಸಿದ್ಧಾ ರೂಢರ ಮಠಕ್ಕೆ ಹೋಗಿ ಬರುವ ಪರಿಪಾಠವನ್ನು ಮೈಗೂಡಿಸಿಕೊಂಡನು. ಹುಬ್ಬಳ್ಳಿಯಲ್ಲಿರುವಾಗ, ಹಾಲಯ್ಯ ತನ್ನ ಮನದಲ್ಲಿ ಮೂಡಿದ ಶಂಕೆಯನ್ನು ಪರಿಹರಿಸಿಕೊಳ್ಳಲು ಬಯಸಿ, ಹುಬ್ಬಳ್ಳಿಯ ಎರಡೆತ್ತಿನ ಮಠದ ಶ್ರೀಗಳೊಂದಿಗೆ ಆಲೋಚಿಸಿದನು. ಸಮಾಧಾನ ಲಭಿಸದೆ, ಶ್ರೀಗಳ ಹೇಳಿಕೆಯ ಮೇರೆಗೆ ಎಮ್ಮಿಗನೂರು ಜಡೆಸಿದ್ದರ ದರ್ಶನಕ್ಕೆ ಹೋದನು. ಅಲ್ಲಿ ತನ್ನ ಮನದ ಸಂಶಯವನ್ನು ಜಡೆಸಿಧ್ದರಿಂದ ಪರಿಹರಿಸಿಕೊಂಡು, ಅವರ ಅಗಾಧವಾದ ವ್ಯಕ್ತಿತ್ವದ ನಿಲುವಿಗೆ ಮಣಿದು, ಅವರಿಂದ ಅಪ್ಪಣೆ ಪಡೆದು ಅವರ ಹೇಳಿಕೆಯಂತೆ ಮರಳಿ ಹುಬ್ಬಳ್ಳಿಗೆ ಬಂದು ಮತ್ತೆ ಸಿದ್ಧಾರೂಢರ ಮಠಕ್ಕೆ ಹೋಗಿ ಬರುವ ಅಭ್ಯಾಸವನ್ನೇ ಮುಂದುವರಿಸಿದನು.

ಘನ ವೈರಾಗ್ಯಶಾಲಿಗಳೂ, ಮಹಾ ಮಹಿಮರೂ ಆದ ಎಳಂದೂರು ಬಸವಲಿಂಗ ಸ್ವಾಮಿಗಳೆಂಬ ಶಿವಯೋಗಿಗಳು ದೇಶ ಸಂಚಾರವನ್ನು ಮಾಡುತ್ತ, ನಿಜಗುಣರ ಕೆಲವು ಸಂದಿಗ್ಧ ವಿಷಯಗಳ ವಿವೇಚನೆಯನ್ನು ಮಾಡಬೇಕೆಂದು ಬಯಸಿ, ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಆಗಮಿಸಿದರು. ಅವರ ಸಂಗಡ ನಿಜಗುಣರ ಶಾಸ್ತ್ರ ವಿಷಯಗಳನ್ನು ಕುರಿತು ಚರ್ಚಿಸಲು ಸಿದ್ಧಾರೂಢರು ಹಾಲಯ್ಯನನ್ನೇ ಮುಂದೆ ಮಾಡಿದರು. ಎಳಂದೂರು ಬಸವಲಿಂಗ ಸ್ವಾಮಿಗಳೆಂಬ ಈ ಶಿವಯೋಗಿಗಳು ಪೂರ್ವದಲ್ಲಿ ಗದುಗಿನ ತೋಂಟದಾರ್ಯಮಠದ ಮರಿಗಳು ಆಗಿದ್ದರು. ಯಾವುದೋ ಒಂದು ಕಾರಣದಿಂದ ದೇಶ ಪರ್ಯಟನ ಮಾಡುತ್ತ ಎಳಂದೂರಿಗೆ ಬಂದು, ಅಲ್ಲಿಯ ವಿರಕ್ತ ಮಠಕ್ಕೆ ಅಧಿಕಾರಿಗಳಾಗಿದ್ದರು. ಯೋಗ ಸಾಧನೆಯಲ್ಲಿ ನಿಷ್ಣಾತರಾದ ಬಸವಲಿಂಗ ಸ್ವಾಮಿಗಳು, ಶಿವಾನುಭವದಲ್ಲಿಯೂ ಒಳ್ಳೇ ಅಳವಟ್ಟಿದ್ದರು. ಅವರ ಅನುಭಾವ ಪಾಂಡಿತ್ಯಗಳಿಗೆ ಮಾರು ಹೋದ ಹಾಲಯ್ಯನು ಅವರನ್ನು ಹಿಂಬಾಲಿಸಿ ಹೋದನು. ಅವರ ಶಿಷ್ಯತ್ವಕ್ಕಾಗಿ ಪರಿಪರಿಯಿಂದ ಬೇಡಿಕೊಂಡನು. ಹಾಲಯ್ಯನನ್ನು ಹಲವು ವಿಧವಾಗಿ ಪರೀಕ್ಷೆಗೆ ಒಡ್ಡಿ, ಅವನ ವ್ಯಕ್ತಿತ್ವದ ನಿಲುವನ್ನು ಅರಿಯಲು ಬಸವಲಿಂಗ ಸ್ವಾಮಿಗಳು ಯತ್ನಿಸಿದರು. ಹೀಗಿರುವಾಗ ಗುರು-ಶಿಷ್ಯರಿಬ್ಬರೂ ಶಂಭುಲಿಂಗನ ಬೆಟ್ಟದ ಗವಿಯಲ್ಲಿ ಅನುಷ್ಠಾನ ಮಾಡತೊಡಗಿದರು. ಕೆಲವು ಕಾಲದ ತರುವಾಯ ಗುರುಗಳು ಶಿಷ್ಯನಾದ ಹಾಲಯ್ಯನ ಆಚಾರ ನಿಷ್ಠೆಯನ್ನೂ, ಧರ್ಮಾಚರಣೆಯನ್ನೂ ಕಂಡು ಬಹಳ ಸಂತೋಷಪಟ್ಟರು. ಆಗ ಹಾಲಯ್ಯನಿಗೆ ಕ್ರಿಯೋಪದೇಶವನ್ನೂ ಮಾಡಿದರು. ಇಂತಹ ಗುರು-ಶಿಷ್ಯರು ಮತ್ತೆ ದೇಶ-ಸಂಚಾರವನ್ನು ಕೈಗೊಂಡು ಊರೂರಿಗೆ ಹೋಗಿ ಸದ್ಭಕ್ತರನ್ನು ಉದ್ಧಾರ ಮಾಡುತ್ತಾ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಗ್ರಾಮಕ್ಕೆ ಬಂದರು. ಅಲ್ಲಿರುವಾಗ ಎಳಂದೂರು ಬಸವಲಿಂಗ ಮಹಾಸ್ವಾಮಿಗಳಿಗೆ ದೇಹಾಲಸ್ಯವು ತೋರಿ ಜಡ್ಡಾಯಿತು. ಅಲ್ಲಿಯೇ ಶ್ರೀಗಳು ಲಿಂಗೈಕ್ಯರಾದರು. ಆಗ ತಾಯಿಯನ್ನು ಆಗಲಿದ ಕರುವಿನಂತೆ ಹಾಲಯ್ಯನು ವಿಯೋಗ ದುಃಖದಿಂದ ಬಳಲಿ ಚಂಚಲ ಚಿತ್ತನಾದನು. ತನ್ನ ಮನಸ್ಸಿನ ಚಾಂಚಲ್ಯವನ್ನು ಕಳೆದುಕೊಳ್ಳಲು ಸೊರಬ ಪ್ರಾಂತದಲ್ಲಿರುವ ಷಟ್ಕಾವ್ಯದ ಗುರುಬಸವ ಸ್ವಾಮಿಗಳವರ ಗದ್ದಿಗೆಯಲ್ಲಿ ಅನುಷ್ಠಾನ ಮಾಡಲು ನಿಶ್ಚಯಿಸಿ ಅಲ್ಲಿಗೆ ಹೋದನು. ಅಲ್ಲಿ ಪ್ರಮುಖರಾಗಿದ್ದ ಉಳವಿ ಮಠದ ಗುರುಬಸವಯ್ಯನವರು ಮತ್ತು ಮಳಗದ್ದಿ ಕೆಂಡಪ್ಪಗೌಡರು ಒದಗಿಸಿದ ಅನುಕೂಲತೆಯಿಂದ ಅಲ್ಲಿಯೇ ಇರಲಾರಂಭಿಸಿದನು.

ಹಾನಗಲ್ಲ ಮಠದ ಉತ್ತರಾಧಿಕಾರ:

ಧಾರವಾಡಜಿಲ್ಲೆಯ ಹಾನಗಲ್ಲಿನಲ್ಲಿ ಶ್ರೀ ಕುಮಾರಸ್ವಾಮಿಗಳ ಮಠವು ಒಂದು ಶ್ರೇಷ್ಠ ವಿರಕ್ತ ಮಠವಾಗಿದ್ದು, ಪುರಾತನ ಕಾಲದಿಂದಲೂ ಪ್ರಖ್ಯಾತಿಯನ್ನು ಪಡೆದಿತ್ತು. ಆ ಮಠದ ಅಧಿಕಾರಕ್ಕೆ ಬಂದಿದ್ದ ಅನೇಕ ಮಹಾಸ್ವಾಮಿಗಳು ಒಳ್ಳೇ ತಪೋನಿಷ್ಠರೂ, ಘನವೈರಾಗ್ಯ ಶಾಲಿಗಳೂ ಮತ್ತು ಧರ್ಮಾಚರಣೆಯುಳ್ಳವರೂ ಆಗಿದ್ದರು. ಮಠದ ಕೀರ್ತಿಯನ್ನು ಉಜ್ವಲವಾಗಿ ಬೆಳಗಿಸಿದ್ದರು. ಅದರ ಪಾವಿತ್ರ್ಯ ಘನತೆಗಳು ಎಲ್ಲೆಡೆಗೆ ಹಬ್ಬಿದ್ದವು. ಇಂತಹ ಹಾನಗಲ್ಲ ಮಠದ ಶ್ರೀ ಫಕೀರ ಸ್ವಾಮಿಗಳು ತಮ್ಮ ಮಠದ ಘನತೆಯ ಮಹಿಮೆಯನ್ನು ಕಾಪಾಡಿಕೊಂಡು, ತಮ್ಮ ಶುದ್ಧ ಚಾರಿತ್ರ್ಯದಿಂದ ವಾಕ್ ಸಿದ್ಧಿಯನ್ನು ಪಡೆದುಕೊಂಡು, ದೇಶದ ನಾನಾ ಭಾಗಗಳಲ್ಲಿ ತಮ್ಮ ಕೀರ್ತಿ ಪಾತಾಕೆಯನ್ನು ಹಾರಿಸಿದ್ದರು. ಉಳವಿಯ ಗುರು ಬಸವಯ್ಯನವರೂ ಮತ್ತು ಕೆಂಡಪ್ಪಗೌಡರೂ ಫಕೀರ ಸ್ವಾಮಿಗಳ ಆತ್ಮೀಯ ಭಕ್ತರೆನಿಸಿದ್ದರು. ಅವರ ಮುಂದೆ ಫಕೀರಸ್ವಾಮಿಗಳು 'ತಮಗೆ ವಯಸ್ಸು ಹೆಚ್ಚಾಗುತ್ತ ನಡೆದಿದ್ದರಿಂದ ಒಬ್ಬ ಯೋಗ್ಯ ವಟುವನ್ನು ತಮ್ಮ ಮಠಕ್ಕೆ ಹುಡುಕುತ್ತಿರುವುದಾಗಿ'ಯೂ ತಿಳಿಸಿದ್ದರು. ಆಗ ಕೆಂಡಪ್ಪಗೌಡರು ಹಾಲಯ್ಯನಿಗೆ ಫಕೀರ ಸ್ವಾಮಿಗಳ ದರ್ಶನ ಮಾಡುವಂತೆ ಮನವೊಲಿಸಿ, ಅನಂತರ ತಮ್ಮ ಅನುಷ್ಠಾನವನ್ನು ಕೈಗೊಳ್ಳಬೇಕೆಂದು ಹೇಳಿ ಒಪ್ಪಿಸಿದರು. ಅದರಂತೆ ಹಾಲಯ್ಯನ ಹಾನಗಲ್ಲ ಫಕೀರ ಸ್ವಾಮಿಗಳ ದರ್ಶನಕ್ಕೆ ಕೆಂಡಪ್ಪಗೌಡ ಮತ್ತು ಉಳವಿಯ ಗುರು ಬಸವಯ್ಯನವರೊಂದಿಗೆ ಕೂಡಿಕೊಂಡು ಹೋದನು. ಅಲ್ಲಿ ಕೆಲವು ಅವಧಿಯವರೆಗೆ ಉಳಿದಿದ್ದಾಗ ಸಮಯವರಿತು, ತಮ್ಮ ವಿಚಾರವನ್ನು ಫಕೀರ ಮಹಾಸ್ವಾಮಿಗಳು ಹಾಲಯ್ಯನ ಮುಂದೆ ಇಟ್ಟರು. ಅದಕ್ಕೆ ಹಾಲಯ್ಯನು "ನಾನು, ನನ್ನ ಕೈಲಾದ ಮಟ್ಟಿಗೆ ಸಮಾಜ ಸೇವೆಯನ್ನು ಮಾಡಬೇಕೆಂಬ ಸಂಕಲ್ಪವುಳ್ಳವನಾಗಿದ್ದೇನೆ. ಆ ಕಾರ್ಯಸಿದ್ಧಿಗಾಗಿ ತಮ್ಮ ಕೃಪಾರ್ಶೀರ್ವಾದವನ್ನು ಪಡೆಯಲು ತಮ್ಮಲ್ಲಿಗೆ ಬಂದಿರುವಾಗ, ಮಠ-ಮಾನ್ಯಗಳ ಜಂಜಾಟದಲ್ಲಿ ಅಶಕ್ತನಾದ ನನ್ನನ್ನು ನೀವು ನೂಕಲು ಯತ್ನಿಸುವುದು ನನ್ನ ಮನಸ್ಸಿಗೆ ಬರುವುದಿಲ್ಲ." ಎಂದು ಸ್ಪಷ್ಟವಾಗಿ ವಿನಮ್ರತೆಯಿಂದ ಹೇಳಿದನು. ಆಗ ಫಕೀರ ಮಹಾಸ್ವಾಮಿಗಳು ಹರ್ಷಚಿತ್ತರಾಗಿ, "ತಮ್ಮಾ, ಸಮಾಜ ಸೇವೆಯನ್ನು ಮಾಡಲು ನಿನಗೆ ಅಡ್ಡಿ ಮಾಡುವವರು ಯಾರು? ಒಂದು ಸ್ಥಾನದ ಅಧಿಕಾರಿಯಾಗದ ಹೊರತು ನಿನ್ನ ಮಾತಿಗೆ ಮನ್ನಣೆಯು ಲಭಿಸಲಾರದು" ಎಂದು ಹೇಳಿದರು. ಅಲ್ಲಿದ್ದವರೂ ಅತೀ ಆಗ್ರಹ ಮಾಡಿದರು. ಕೊನೆಗೆ ಎಲ್ಲರ ಆತ್ಮೀಯ ಒತ್ತಾಯಕ್ಕೆ ಶಿರಬಾಗಿ ವಯೋವೃದ್ಧರಾದ ಫಕೀರ ಮಹಾಸ್ವಾಮಿಗಳ ಸೇವೆಯನ್ನು ಮಾಡಲು ಒಪ್ಪಿ ಅಲ್ಲಿಯೇ ಉಳಿದ ಹಾಲಯ್ಯನು, ಹಾನಗಲ್ಲ ಮಠದಲ್ಲಿ ದಾಸೋಹವನ್ನು ಒಳ್ಳೇ ಸುವ್ಯವಸ್ಥೆಯಿಂದ ನಡೆಯಿಸ ಹತ್ತಿದನು. ಭಕ್ತರ ಬಯಕೆಯಂತೆ ಸಂಚಾರವನ್ನು ಮಾಡುತ್ತ, ತಮ್ಮ ಸದ್ಭೋಧಾದಿಗಳಿಂದ ಜನ ಜಾಗೃತಿಯನ್ನು ಮಾಡಲಾರಂಭಿಸಿದನು. ಹಾಲಯ್ಯನು ಮಲೆನಾಡಿಗೆ ಸಂಚಾರಕ್ಕೆ ಹೋದಾಗ, ಫಕೀರಸ್ವಾಮಿಗಳಿಗೆ ಅತೀವಾರ್ಧಕ್ಯದ ಕಾರಣ ಬಂದ ಖಾಯಿಲೆ ತೀವ್ರಗೊಂಡು ಅದರಲ್ಲಿಯೇ ಅವರು ಲಿಂಗೈಕ್ಯರಾದರು. ಅದಕ್ಕೂ ಮೊದಲು ತಮ್ಮನ್ನು ಕಾಣಲು ಬಂದ, ಬಿದರಿ ಶ್ರೀ ಕುಮಾರ ಸ್ವಾಮಿಗಳಿಗೆ, ತಮ್ಮ ಮಠದ ಉತ್ತರಾಧಿಕಾರಿಯನ್ನು ಮಾಡುವ ಜವಾಬ್ದಾರಿಯನ್ನು ವಹಿಸಿಕೊಟ್ಟು, ಸಕಲ ಭಕ್ತ ವೃಂದಕ್ಕೆ ಬಿದರಿ ಕುಮಾರ ಸ್ವಾಮಿಗಳು ಹಾಲಯ್ಯನಿಗೆ ಉತ್ತರಾಧಿಕಾರವನ್ನು ಒಪ್ಪಿಕೊಳ್ಳಲು ಕೇಳಿಕೊಂಡು 'ಸದಾಶಿವ ಸ್ವಾಮಿ'ಗಳೆಂದು ಹೆಸರಿಟ್ಟು ಮಠಾಧಿಕಾರವನ್ನು ವಿದ್ಯುಕ್ತವಾಗಿ ವಹಿಸಿಕೊಟ್ಟರು. ಅಂದಿನಿಂದ ಹಾಲಯ್ಯ ಹಾನಗಲ್ಲ ಕುಮಾರ ಮಹಾಸ್ವಾಮಿಗಳಾಗಿ ರೂಪಗೊಂಡರು. ಕುಮಾರ ಸ್ವಾಮಿಗಳು ನಾಡಿನ ಅನೇಕ ಭಾಗಗಳಿಗೆ ಸಂಚಾರ ಕೈಗೊಂಡು ಧರ್ಮ ಜಾಗೃತಿಯ ಮಹಾಕಾರ್ಯವನ್ನು ನೆರವೇರಿಸಿದರು. ಭಾರತೀಯ ಧರ್ಮ, ಸಂಸ್ಕೃತಿ, ಜ್ಞಾನದ ನಿಧಿಯೆಲ್ಲ ಸಂಸ್ಕೃತದಲ್ಲಿದ್ದುದರಿಂದ ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆ, ಅಬ್ಬಿಗೇರಿ, ರೋಣ, ಹಾಳಕೇರಿ ಮುಂತಾದ ಊರುಗಳಲ್ಲಿ ಸಂಸ್ಕೃತ ಪಾಠಶಾಲೆಗಳನ್ನು ತೆರೆದು, ಅವೆಲ್ಲ ಸಂಸ್ಥೆಗಳು ಸುವ್ಯವಸ್ಥೆಯಿಂದ ನಡೆಯಬೇಕೆಂದು ಬಗೆದು ಶಾಶ್ವತ ಹಣಕಾಸು ಒದಗುವಂತೆ ಫಂಡುಗಳನ್ನು ಕೂಡಿಸಿಟ್ಟರು.

ವೀರಶೈವ ಮಹಾಸಭೆಯ ಸ್ಥಾಪನೆ:

1903ರಲ್ಲಿ ಧಾರವಾಡದಲ್ಲಿ, ಸಮಾಜದ ಕೆಲವು ಮುಖಂಡರನ್ನು ಆಮಂತ್ರಿಸಿ, ಜರುಗಿಸಿದ ಸಮಾಲೋಚನಾ ಸಭೆಯಲ್ಲಿ ಕೈಕೊಂಡ ನಿರ್ಣಯದಂತೆ 'ಅಖಿಲ ಭಾರತ ವೀರಶೈವ ಮಹಾಸಭೆ' ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. 1904ನೆಯ ಇಸವಿಯ ಮೇ ತಿಂಗಳಲ್ಲಿ ದಾನಶೂರ ಸಿರಸಂಗಿ ಲಿಂಗರಾಜ ದೇಸಾಯಿ ಇವರ ಘನ ಅಧ್ಯಕ್ಷತೆಯಲ್ಲಿ 'ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಥಮ ಮಹಾಧಿವೇಶನವನ್ನು ನೆರವೇರಿಸಲಾಯಿತು. ಅದರ ಪ್ರಭಾವದ ಪರಿಣಾಮವಾಗಿ ಜಡವಾಗಿದ್ದ ವೀರಶೈವ ಸಮಾಜವು ಜಾಗೃತವಾಗಿ ವ್ಯಕ್ತಿ ಹಾಗೂ ಸಮಾಜದ ಉದ್ಧಾರಕ್ಕಾಗಿ ಉಪಯುಕ್ತವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಮುಂದಾಯಿತು. ಅದಕ್ಕೆಲ್ಲ ಪ್ರೇರಕಶಕ್ತಿಯಾಗಿ ಕೇಂದ್ರ ಬಿಂದುವಾಗಿ, ಹಿನ್ನಲೆಯಲ್ಲಿದ್ದು, ಸಕ್ರಿಯಗೊಳಿಸಿದ ಕೀರ್ತಿ, ಹಾನಗಲ್ಲ ಕುಮಾರ ಮಹಾಸ್ವಾಮಿಗಳಿಗೆ ಸಲ್ಲುತ್ತದೆ.

ಹಾನಗಲ್ಲ ಶ್ರೀಗಳು ವೀರಶೈವ ಸಮಾಜಕ್ಕೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಯತ್ನಿಸುತ್ತಿದ್ದಂತೆ, ಧಾರ್ಮಿಕ ಜಾಗೃತಿಯನ್ನೂ ಮಾಡುತ್ತ ಬಂದರು. ವೀರಶೈವ ಧರ್ಮದ ಅನೇಕ ಕೃತಿಗಳನ್ನು ಸಂಶೋಧಿಸುವ, ಮುದ್ರಿಸುವ ಸುಲಭವಾಗಿ ಓದುಗರಿಗೆ ಲಭಿಸುವಂತೆ ಮಾಡುವ ಯೋಜನೆಯೊಂದನ್ನು ಕೃತಿಗಿಳಿಸಿದರು. ತಂಜಾವೂರು, ಮದ್ರಾಸ್, ಕುಂಭಕೋಣಂ, ಮಧುರೈ ಮೊದಲಾದ ದೊಡ್ಡ ದೊಡ್ಡ ಪಟ್ಟಣಗಳಲ್ಲಿರುವ ವೀರಶೈವ ಧರ್ಮ-ಸಂಸ್ಕೃತಿಯನ್ನು ಒಳಗೊಂಡಿರುವ ಗ್ರಂಥಗಳನ್ನು ಅಭ್ಯಸಿಸಲು ಪಂಡಿತರ ತಂಡವನ್ನು ಕಳುಹಿಸಿದರು. ಸಂಸ್ಕೃತ, ತಮಿಳು, ತೆಲುಗು, ಮಲೆಯಾಳಂ, ನೇಪಾಳಿಯಲ್ಲಿದ್ದ ಧರ್ಮಗ್ರಂಥಗಳನ್ನು ಅಧ್ಯಯನ ಮಾಡಲಿಕ್ಕೆ ಅವಕಾಶ ಕಲ್ಪಿಸಿಕೊಟ್ಟು, ಅವುಗಳನ್ನು ಕನ್ನಡ ಭಾಷೆಗೆ ಅನುವಾದಿಸಲು ಪ್ರೇರಣೆಯನ್ನಿತ್ತರು.

ಶಿವಯೋಗ ಮಂದಿರ ಸ್ಥಾಪನೆ:

ಘನವೈರಾಗ್ಯದ ತಳಹದಿಯ ಮೇಲೆ ಸ್ಥಾಪಿಸಲ್ಪಟ್ಟ ಒಂದು ಧಾರ್ಮಿಕ ಸಂಸ್ಥೆಯು ವೀರಶೈವರಿಗೆ ಅತೀ ಅವಶ್ಯವಾಗಿದೆಯೆಂದು ಬಗೆದ ಬಾಗಲಕೋಟೆಯ ಘನವೈರಾಗ್ಯಶಾಲಿಯಾದ ಮಲ್ಲಣಾರ್ಯರು ಹಾನಗಲ್ಲ ಕುಮಾರ ಸ್ವಾಮಿಗಳ ಮುಂದೆ ತಮ್ಮ ವಿಚಾರವನ್ನಿಟ್ಟರು. ಬಾಗಲಕೋಟೆಯಲ್ಲಿ ಕ್ರಿ.ಶ. 1908ರಲ್ಲಿ ಸೇರಿದ ವೀರಶೈವ ಮಹಾಸಭೆಯ ನಾಲ್ಕನೆಯ ಅಧಿವೇಶನದಲ್ಲಿ ನಿರ್ಣಯಿಸಿದಂತೆ ಶಿವಯೋಗ ಮಂದಿರವೆಂಬ ಧಾರ್ಮಿಕ ಸಂಸ್ಥೆಯೊಂದನ್ನು ಹುಟ್ಟುಹಾಕಿ, ಅಲ್ಲಿ ವೀರಶೈವ ಮಾಹೇಶ್ವರ ವಟುಗಳಿಗೆ, ವೀರಶೈವ ಧರ್ಮ, ಸಂಸ್ಕಾರಗಳ ಅರಿವು ಮಾಡಿಕೊಟ್ಟು, ಅವರನ್ನು ಜ್ಞಾನ ಕ್ರಿಯಾವಂತರನ್ನಾಗಿಸಿ, ಅವರ ಮುಖಾಂತರ ವೀರಶೈವ ಸಮಾಜದ ಉತ್ಕರ್ಷವನ್ನು ಸಾಧಿಸಬೇಕೆಂದು ಬಯಸಿದರು. ಇಳಕಲ್ಲ ಚಿತ್ತರಗಿ ಮಹಾಂತ ಶಿವಯೋಗಿಗಳು ತೋರಿಸಿದ ಸ್ಥಳದಲ್ಲಿ ಶಿವಯೋಗ ಮಂದಿರವೆಂಬ ಸಂಸ್ಥೆಯನ್ನು ಸ್ಥಾಪಿಸಬೇಕೆಂದು ಸಂಕಲ್ಪಿಸಿ, ಬಾದಾಮಿ ತಾಲೂಕಿನ ಮಹಾಕೂಟದ ಪಕ್ಕದಲ್ಲಿರುವ ಪ್ರಶಾಂತವಾದ ದಟ್ಟಡವಿಯಲ್ಲಿ ಮಲಾಪಹಾರ ನದಿಯ ದಂಡೆಯ ಮೇಲೆ, ಇಳಕಲ್ಲ ಶಿವಯೋಗಿಗಳು ಸ್ಪರ್ಶಿಸಿದ ಸ್ಥಳದಲ್ಲಿ ಹಲವು ವೀರಶೈವ ಪ್ರಮುಖರೊಂದಿಗೆ ಹೋಗಿ, 'ಶಿವಯೋಗ ಮಂದಿರ' ಎಂಬ ಸಂಸ್ಥೆಯನ್ನು 1912ರಲ್ಲಿ ಸ್ಥಾಪಿಸಿದರು. ಆ ಸಂಸ್ಥೆಯು ನಿರಂತರವಾಗಿ ನಡೆಯಲು ಬೇಕಾಗುವ ಆರ್ಥಿಕ ನಿರ್ವಹಣೆಗಾಗಿ, ಬಾಗಲಕೋಟೆಯಲ್ಲಿ ಒಂದು ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿಯನ್ನು ಪ್ರಾರಂಭಿಸಿದರು. ಅದರ ದುಡಿಮೆಯ ಲಾಭಾಂಶದಿಂದಲೇ ಈ ತರಬೇತಿ ಸಂಸ್ಥೆಯು ನಡೆಯುವಂತೆ ವ್ಯವಸ್ಥೆಗೊಳಿಸಿದರು.

ಧರ್ಮಾಚರಣೆಯಿಂದ ಆತ್ಮಜ್ಞಾನಿಗಳಾದ ವಟುಗಳು ಸಮಾಜದಲ್ಲಿ ಧರ್ಮಜಾಗೃತಿಯನ್ನು ಮೂಡಿಸಿ, ಧರ್ಮಾಚರಣೆಯಲ್ಲಿ ತೊಡಗುವಂತೆ ಮಾಡಲು ಕೀರ್ತನೆ,ಸಂಗೀತ, ಪ್ರವಚನ ಮೊದಲಾದ ಮಾಧ್ಯಮಗಳ ಮುಖಾಂತರ ಕಾರ್ಯ ಮಾಡುವಂತೆ ನೋಡಿಕೊಂಡರು. ಅಂತಹ ಸಂಸ್ಥೆಗಳಲ್ಲೊಂದಾದ ಸಂಗೀತ ಮಹಾವಿದ್ಯಾಲಯವು ಲಿಂಗೈಕ್ಯ ಪಂಚಾಕ್ಷರಿ ಗವಾಯಿಗಳ ಅನುಪಮ ಕಾಣಿಕೆ, ಹುಟ್ಟುಗುರುಡರಾದ ಪಂಚಾಕ್ಷರಿಯವರಿಗೆ ಸಂಗೀತ ಶಿಕ್ಷಣ ಕೊಡಿಸಿ, ಮಹಾ ಸಂಗೀತಗಾರರನ್ನಾಗಿ ಮಾಡಿದ ಕೀರ್ತಿಹಾನಗಲ್ಲ ಶ್ರೀಗಳಿಗೆ ಸಲ್ಲುತ್ತದೆ.ಅಖಿಲ ಭಾರತ ವೀರಶೈವ ಮಹಾಸಭೆಯ ಮೊದಲಿನ ಏಳು ಮಹಾಸಭೆಗಳು ಜರುಗಲು ಬೇಕಾದ ಹಣಕಾಸನ್ನು ಹಾನಗಲ್ಲ ಶ್ರೀಗಳೇ ಕೂಡಿಸಿ ಕೊಡುತ್ತಿದ್ದರು. ಅದರಿಂದ ಆರ್ಥಿಕ ತೊಂದರೆಗಳು ಮುಂದಿನ ಮಹಾಧಿವೇಶನಗಳಿಗೆ ಬಾರದಿರಲೆಂದು ಆಲೋಚಿಸಿ, ಹಾನಗಲ್ಲ ಶ್ರೀಗಳಲ್ಲಿ ಶ್ರದ್ಧೆ ಭಕ್ತಿಗಳಿರುವ ಜಗದ್ಗುರು ಜಯದೇವ ಮಹಾಸ್ವಾಮಿಗಳು ಸ್ಥಾಯಿಫಂಡನ್ನು ಸ್ಥಾಪಿಸಿ ಮಹಾಸಭೆಗೆ ಆರ್ಥಿಕ ನೆರವನ್ನು ಒದಗಿಸಿಕೊಟ್ಟರು.

ಅಖಿಲಭಾರತ ವೀರಶೈವ ಮಹಾಸಭೆಯು ಸಾಮಾಜಿಕ ಸಂಸ್ಥೆಯಾಗಿ ಪರಿವರ್ತನೆಗೊಳ್ಳಲು ಶ್ರೀಗಳು ಧರ್ಮೊತ್ತೇಜಕ ಸಭೆ' ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಅದರ ಮುಖಾಂತರ ಧಾರ್ಮಿಕ ವಿಷಯದ ವಿವೇಚನೆಯನ್ನು ಕೈಗೊಂಡರು. 1909ನೆಯ ಇಸ್ವಿಯಲ್ಲಿ ಪ್ರಥಮ ಧರ್ಮೊತ್ತೇಜಕ ಸಭೆಯು ಬಂಕಾಪೂರದಲ್ಲಿ ನಡೆಯಿತು. ಅದರ ಅಧ್ಯಕ್ಷತೆಯನ್ನು ಹುಬ್ಬಳ್ಳಿಯ ಜಗದ್ಗುರು ಮೂರು ಸಾವಿರ ಮಠಾಧ್ಯಕ್ಷರಾದ ಗಂಗಾಧರ ಮಹಾಸ್ವಾಮಿಗಳು ವಹಿಸಿದ್ದರು. ವೈದ್ಯಶಾಸ್ತ್ರದ ಸಂಶೋಧನೆಗೂ ಶ್ರೀಗಳು ಲಕ್ಷ್ಯವನ್ನಿತ್ತು. ಬಡವರಿಗೆ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಔಷದೋಪಚಾರ ಸಿಗಬೇಕೆಂದು ಚಿಂತಿಸಿ ತಾವೇ ಸ್ವತಃ ಆಯುರ್ವೇದವನ್ನು ಅಭ್ಯಸಿಸಿದುಲ್ಲದೆ ಅನೇಕರನ್ನು ತರಬೇತಿಗೆ ಕಳುಹಿಸಿಕೊಟ್ಟರು. ಶಿವಯೋಗ ಮಂದಿರದಲ್ಲಿ ಭಸ್ಮ-ಲಿಂಗಗಳ ನಿರ್ಮಾಣ ಮಾಡಲು ಗೋಶಾಲೆಯನ್ನು ಅಭಿವೃದ್ಧಿ ಪಡಿಸಿದರು. ಪೂಜ್ಯ ಮಹಾಸ್ವಾಮಿಗಳು ಅವಿಶ್ರಾಂತವಾಗಿ ಅರವತ್ತಮೂರು ವರುಷಗಳು ದಿವ್ಯಬಾಳನ್ನು ಬಾಳಿ ಬೆಳಗಿ, ಶಾಲಿವಾಹನಶಕೆ 1929 ಮಾಘಮಾಸದ ಕೃಷ್ಣಪಕ್ಷ ಸಪ್ತಮಿಯಂದು ಅವರು ಲಿಂಗೈಕ್ಯರಾದರು.